ಒಬ್ಬ ಶ್ರೇಷ್ಠ ತಂದೆ ತಾಯಿ (ಪೋಷಕರು) ತನ್ನ ಮಗನನ್ನು / ಮಗಳನ್ನು ಶಾಲೆಗೆ ಸೇರಿಸುವಾಗ ಶಿಕ್ಷಕರಿಗೆ ಮಾಡಿಕೊಂಡ ಕಳಕಳಿಯ ವಿನಂತಿ ಹೀಗಿತ್ತು.
ಆತ್ಮೀಯ ಶಿಕ್ಷಕ ಬಂಧುಗಳೇ,.
1- ದಯವಿಟ್ಟು ನನ್ನ ಮಗನಿಗೆ/ ಮಗಳಿಗೆ ಅಂಕಗಳ ಹುಚ್ಚು ಹಿಡಿಸಬೇಡಿ.
2- "ಒಂದು ಉನ್ನತ ಹುದ್ದೆ ಹಿಡಿಯುವುದಕ್ಕಾಗಿ ನೀನು ಓದಲಿಕ್ಕೆ ಬಂದಿದ್ದೀಯ" ಎಂದು ದಯವಿಟ್ಟು ಹೇಳಿಕೊಡಬೇಡಿ.
3- ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ ಖುಷಿಯಿಂದ, ಹೆಮ್ಮೆಯಿಂದ ನಿಷ್ಟೆಯಿಂದ ಮಾಡುವುದೇ ಶ್ರೇಷ್ಠ ಎಂಬುದನ್ನು ಹೇಳಿಕೊಡಿ.
4- ಅವನಿಗೆ ಉತ್ತಮ ಪುಸ್ತಕಗಳ ಹುಚ್ಚು ಹಿಡಿಯುವಂತೆ ಮಾಡಿ, ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ.
5- ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ.
6- ಅವನಿಗೆ ಬದುಕು ಕಲಿಸಿ, ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಯಿಂದ ಇರುವುದನ್ನು ಹೇಳಿಕೊಡಿ, ನೋವಿನಲ್ಲೂ ನಗುವುದನ್ನು ಕಲಿಸಿ.
7- ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ.
8- ಸಾಧ್ಯವಾದರೆ ಅವರಿಗೆ ಪ್ರಕೃತಿಯಲ್ಲಿ ಕಳೆದುಹೋಗುವುನ್ನು ಹೇಳಿಕೊಡಿ, ಸುರಿಯುವ ಮಳೆಯಲ್ಲಿ ನೆನೆಯುವ, ಚಿಟ್ಟೆಗಳ ಚಂದವನ್ನು ಆನಂದಿಸುವ, ಹಾರುವ ಪಕ್ಷಿಗಳನ್ನು ಎಣಿಸುವ, ಸಾಲಾಗಿ ನಡೆದುಕೊಂಡು ಹೋಗುವ ಇರುವೆಗಳನ್ನು ಹಿಂಬಾಲಿಸುವ, ಬೀಜ ಮೊಳೆಯುವುದನ್ನು ಕಾಯುವ,ಪ್ರಕೃತಿ ಕಾಪಾಡುವುದನ್ನು ಕುತೂಹಲ ತುಂಬಿ.
9- ಗಿಡ ನೆಡಲು ಪಣತೊಡುವ ಮನಸ್ಸು ಬರುವಂತೆ ಮಾಡಿ. ಬದುಕಿನಲ್ಲಿ ಮೋಸ ಮಾಡಿ ಗೆಲ್ಲುವುದಕ್ಕಿಂತ, ಪ್ರಾಮಾಣಿಕವಾಗಿ ಸೋಲುವುದನ್ನು ಕಲಿಸಿ.
10- ಅನ್ಯಾಯ ಮಾಡಿ ಗಳಿಸುವುದಕ್ಕಿಂತ, ಒಬ್ಬರಿಗೆ ನೋವು ಮಾಡಿ ಪಡೆಯುವುದಕ್ಕಿಂತ ಪ್ರಾಮಾಣಿಕತೆಯಿಂದ ಸಾಧಿಸಲು ತಿಳಿಸಿ.
11- ಜೀವನ ತುಂಬಾ ಸುಂದರವಾಗಿದೆ ಎಂಬುದನ್ನು ಹೇಳಿಕೊಡಿ.
12- ಪ್ರತಿ ಕ್ಷಣದಲ್ಲೂ ಖುಷಿಯಿದೆ ಎಂಬುದನ್ನು ಅವನು ತಿಳಿಯಲಿ.
13- ಹೆಣ್ಣನ್ನು ಗೌರವಿಸುವ, ದೀನ ದುರ್ಬಲರನ್ನು, ವಯೋ ವೃದ್ಧರನ್ನು ನೋಡಿ ಮರುಗುವ ಗುಣ ಕಲಿಸಿ, ಕಷ್ಟದಲ್ಲಿ, ನೋವಿನಲ್ಲಿರುವವರ ಸಹಾಯಕ್ಕೆ ಧಾವಿಸುವ ಛಲ ಬರುವಂತೆ ಮಾಡಿ.
14- ಫೇಲಾದರೂ ಪರವಾಗಿಲ್ಲ ಬದುಕಿನಲ್ಲಿ ಖುಷಿಯಾಗಿ ದುಡಿದು ಜೀವಿಸುವುದನ್ನು ಕಲಿಸಿ.
15- ನಾನು ಅವನನ್ನು ಒಬ್ಬ ಡಾಕ್ಟರ್, ಎಂಜಿನಿಯರ್, ಉನ್ನತ ಅಧಿಕಾರಿಗಿಂತ ಒಳ್ಳೆಯ ಮನುಷ್ಯನಾಗಿ ಬಾಳುವುದನ್ನು ಕಾಣ ಬಯಸುತ್ತೇನೆ. ಅವನಿಗೆ /ಅವಳಿಗೆ ಇಂಥ ಗುಣಗಳನ್ನು ರೂಢಿಸಿದರೆ ನಾನು ನಿಮಗೆ ಋಣಿ.
ಧನ್ಯವಾದಗಳು....
ಇಂತಿ ನಿಮ್ಮವ,
ಪ್ರಸಾದ ಕಾಂಬಳೆ
****************************************